
ಶಿವಮೊಗ್ಗ : ದಾಖಲೆ ಪ್ರಮಾಣದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ಸಂಗ್ರಹವಾಗುತ್ತಿದ್ದು, ತೆರಿಗೆ ಸಲಹೆಗಾರರ ಪಾತ್ರ ಮಹತ್ತರವಾಗಿದೆ ಎಂದು ಶಿವಮೊಗ್ಗದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ (ಪ್ರಭಾರ ಜಾರಿ–ಆಡಳಿತ) ವಿ.ಕುಮಾರ್ ಹೇಳಿದರು.
ಇದನ್ನೂ ಓದಿ » ಆಯನೂರು ಗೇಟ್ ಸರ್ಕಲ್ ಬಳಿ ಸಂಚಾರ ಬದಲಾವಣೆ, ಇನ್ಮುಂದೆ ‘ನೋ ಎಂಟ್ರಿ’ ಆದೇಶ ಜಾರಿ, ಕಾರಣವೇನು?
ತೆರಿಗೆ ಸಲಹೆಗಾರರು ತೆರಿಗೆ ಪಾವತಿದಾರರು ಮತ್ತು ಇಲಾಖೆ ಮಧ್ಯೆ ಪ್ರಮುಖ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ನೂತನ ಆದಾಯ ತೆರಿಗೆ ಕಾಯ್ದೆ ಬಗ್ಗೆ ಕಾರ್ಯಗಾರ ಏರ್ಪಡಿಸಿರುವುದು ತುಂಬಾ ಪ್ರಯೋಜನವಾಗಲಿದೆ. ಇದರಿಂದ ಕಾನೂನಿನ ಅರಿವು ಹೆಚ್ಚಾಗಿ ತೆರಿಗೆ ವ್ಯಾಪ್ತಿ ಮತ್ತು ತೆರಿಗೆ ಸಂಗ್ರಹವು ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
– ವಿ.ಕುಮಾರ್, ಶಿವಮೊಗ್ಗದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ (ಪ್ರಭಾರ ಜಾರಿ–ಆಡಳಿತ)
ತೆರಿಗೆ ಸಂಗ್ರಹಣೆಯಲ್ಲಿ ದಾಖಲೆಯಾಗಲು ತೆರಿಗೆ ಸಲಹೆಗಾರರು ಹಾಗೂ ಸನ್ನದು ಲೆಕ್ಕ ಪರಿಶೋಧಕರ ಸಹಕಾರ ಮತ್ತು ಶ್ರಮ ಅಪಾರ. ಕಾರ್ಪೊರೇಟ್ ಟ್ಯಾಕ್ಸ್ 11 ಲಕ್ಷ ಕೋಟಿ ರೂ., ವೈಯುಕ್ತಿಕ ಆದಾಯ ತೆರಿಗೆ 14 ಲಕ್ಷ ಕೋಟಿ ರೂ.ಗೆ ಏರಿಕೆ ಆಗಿದೆೆ. ಇಂತಹ ಸೆಮಿನಾರ್ ಕಾರ್ಯಕ್ರಮಗಳಿಗೆ ಮುಂದೆಯೂ ಸಹ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಜತೆಗೆ ಸಂಘವು ಕೈಜೋಡಿಸುತ್ತದೆ.
– ಬಿ.ಗೋಪಿನಾಥ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ
ಆದಾಯ ತೆರಿಗೆ ಕಾಯ್ದೆಗಳು ಅನೇಕ ಬದಲಾವಣೆ ಆಗಿದ್ದು, ಹೊಸ ಕಾಯ್ದೆ ತುಂಬಾ ಸರಳವಾಗಿ ಸಾಮಾನ್ಯ ಕರದಾತನಿಗೂ ಅರ್ಥವಾಗುವಂತೆ ಇದೆ.
– ಕೆ.ಶ್ರೀನಿವಾಸ ರಾವ್, ಆದಾಯ ತೆರಿಗೆ ಅಧಿಕಾರಿ
ಇದನ್ನೂ ಓದಿ » ಉದ್ಯೋಗಾಕಾಂಕ್ಷಿಗಳಿಗೆ Good News: ಜೂ.12 ರಂದು ನೇರ ಸಂದರ್ಶನ, ಎಲ್ಲಿ, ಯಾವಾಗ?
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ 2025 ಕುರಿತು ವಿಚಾರ ವಿಮರ್ಶೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ-2025 ದೇಶದಲ್ಲಿ ಜಾರಿಗೆ ಬಂದಿದ್ದು, ಕರ್ನಾಟಕ ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಪ್ರಾಮಾಣಿಕ ತೆರಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಾರಣ ಎಂದು ತಿಳಿಸಿದರು.
ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿ.ಮಂಜುನಾಥ ಮಾತನಾಡಿ, ಆದಾಯ ತೆರಿಗೆ 2025ಕ್ಕೆ ಆದ ತಿದ್ದುಪಡಿಗಳ ಬಗ್ಗೆ ಸೆಮಿನಾರ್ ಏರ್ಪಡಿಸಿರುವುದು ಸೂಕ್ತವಾಗಿದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಬಗ್ಗೆ ಇದ್ದಂತ ಗೊಂದಲ, ಆಸ್ಪಷ್ಟತೆ ನಿವಾರಣೆ ಬಗ್ಗೆ ಸಂಘವು ಅನೇಕ ಸೆಮಿನಾರ್ ಏರ್ಪಡಿಸಿದೆ ಎಂದು ತಿಳಿಸಿದರು.
ಸನ್ನದು ಲೆಕ್ಕ ಪರಿಶೋಧಕ ಸಿಎ ತರುಣ್ ಕೊಠಾರಿ ರವರು ಹೊಸ ಆದಾಯ ತೆರಿಗೆ 2025ರ ಬಗ್ಗೆ ವಿವರವಾಗಿ ಉಪನ್ಯಾಸ ನೀಡಿ ಕೊನೆಯಲ್ಲಿ ತೆರಿಗೆ ಸಲಹೆಗಾರರ ಎಲ್ಲಾ ಸಂದೇಹಗಳನ್ನು ನಿವಾರಿಸಿ ಸಮರ್ಪಕವಾದ ಮಾಹಿತಿಯನ್ನು ನೀಡಿದರು.
ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ಮನೋಹರ, ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ, ಖಜಾಂಚಿ ಸುರೇಶ್, ಸಹ ಕಾರ್ಯದರ್ಶಿ ಸುರೇಶ್ ಬಾಬು, ಗಂಗಾಧರ ಗೌಡ, ನಿರ್ದೇಶಕರುಗಳಾದ ಜಿ.ಕೇಶವ, ಶಶಿಧರ್, ಸೇತುರಾಮ್, ಜನಾರ್ಧನ್, ಹಿರಿಯ ತೆರಿಗೆ ಸಲಹೆಗಾರ ಮಧುಸೂದನ ಐತಾಳ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ನಿರ್ದೇಶಕ ಎಸ್.ಎಸ್.ಉದಯ್ ಕುಮಾರ್, ಅನೇಕ ತೆರಿಗೆ ಸಲಹೆಗಾರರು ಇದ್ದರು.
ಇದನ್ನೂ ಓದಿ » ನಾಳೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ 78 ನೇ ಹುಟ್ಟುಹಬ್ಬ, ಅರ್ಥಪೂರ್ಣ ಆಚರಣೆಗೆ ಅಭಿಮಾನಿ ಬಳಗ ಸಜ್ಜು